ವಿಶ್ವದ ವೇಗದ ಕಾರಿನಲ್ಲಿ ದುಬೈ ಪೊಲೀಸರ ಪ್ಯಾಟ್ರೋಲಿಂಗ್!
By Public TVLast updated Mar 27, 2017
– ದುಬೈ ಪೊಲೀಸರಿಂದ ಬುಗಾಟಿ ವೇಯ್ರಾನ್ ಕಾರು ಖರೀದಿ
– ಗಂಟೆಗೆ 407 ಕಿಮೀ ಕ್ರಮಿಸಬಲ್ಲ ಸಾಮರ್ಥ್ಯದ ಕಾರು
ದುಬೈ: ವಿಶ್ವದ ಅತ್ಯಂತ ಎತ್ತರ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದುಬೈ ನಗರ ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ವಿಶ್ವದಲ್ಲೇ ವೇಗದ ಕಾರನ್ನು ಹೊಂದುವ ಮೂಲಕ ದುಬೈ ಪೊಲೀಸರು ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಗಿದ್ದಾರೆ.
ದುಬೈ ಪೊಲೀಸರ ಬಳಿ ಈಗ ದುಬಾರಿ ಲಕ್ಷುರಿ ಬುಗಾಟಿ ವೇಯ್ರಾನ್ ಕಾರುಗಳು ಇದೆ. ಗಂಟೆಗೆ 407 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ರುವ ಈ ಕಾರನ್ನು 2016ರ ಏಪ್ರಿಲ್‍ನಲ್ಲಿ ದುಬೈ ಪೊಲೀಸರು ಖರೀದಿಸಿದ್ದರು.
ಒಂದು ಬುಗಾಟಿ ವೇಯ್ರಾನ್ ಕಾರಿಗೆ 10.5 ಕೋಟಿ ರೂ. ಬೆಲೆ ಇದ್ದು, 1 ಸಾವಿರ ಅಶ್ವಶಕ್ತಿಯ 16 ಸಿಲಿಂಡರ್ ಎಂಜಿನ್ ಹೊಂದಿದೆ. 0 ಯಿಂದ 97 ಕಿ.ಮೀ ವೇಗವನ್ನು ಕೇವಲ 2.5 ಸೆಕೆಂಡ್‍ನಲ್ಲಿ ತಲುಪುವ ಸಾಮರ್ಥ್ಯ ಈ ಬುಗಾಟಿ ಕಾರಿಗೆ ಇದೆ.
ಗಿನ್ನಿಸ್ ದಾಖಲೆ ವೆಬ್‍ಸೈಟ್ ಪ್ರಕಾರ ಬುಗಾಟಿ ವೇಯ್ರಾನ್ ಕಾರು ವೇಗದ ಕಾರುಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಹೆನ್ನೆಸ್ಸಿ ವೆನೂಮ್ ಜಿಟಿ ಇದ್ದು, ಇದು ಗಂಟೆಗೆ 427 ಕಿ.ಮೀ ವೇಗದಲ್ಲಿ ಕ್ರಮಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಈ ಕಾರೇ ಯಾಕೆ?
ವಿಶ್ವದ ಅತಿ ದೊಡ್ಡ 828 ಮೀಟರ್ ಎತ್ತರದ ಬುರ್ಜ್ ಖಲೀಫಾ ಸೇರಿದಂತೆ ಹಲವು ಪ್ರೇಕ್ಷಣಿಯ ಸ್ಥಳಗಳನ್ನು ನೋಡಲು ಪ್ರವಾಸಿಗರು ಬರುತ್ತಾರೆ. ಈ ವೇಳೆ ಅವರಿಗೆ ರಕ್ಷಣೆ ನೀಡಲು ಈ ಕಾರನ್ನು ಖರೀದಿಸಲಾಗಿದೆ ಎಂದು ದುಬೈ ಪೊಲೀಸರು ಹೇಳಿದ್ದಾರೆ.
ದುಬೈ ಪೊಲೀಸರು 14 ವಿವಿಧ ಕಾರುಗಳನ್ನು ಬಳಸುತ್ತಿದ್ದು, ಇವುಗಳ ಪೈಕಿ ಬುಗಾಟಿ ವೇಯ್ರಾನ್ ಮೊದಲ ಸೂಪರ್ ಕಾರ್ ಆಗಿದೆ. ಮೆಕ್ಲಾರೆನ್ ಎಂಪಿ4-12ಸಿ, ಲಂಬೋರ್ಗಿನಿ ಅವೆಂಟೆಡರ್, ಫೆರಾರಿ ಎಫ್‍ಎಫ್, ಮರ್ಸಿಡೀಸ್ ಎಸ್‍ಎಲ್‍ಎಸ್‍ಎಂಜಿ, ರೋಶ್ ಮುಸ್ತಾಂಗ್, ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ಆಡಿ ಆರ್8 ವಿಓ1 ಪ್ಲಸ್, ನಿಸ್ಸಾನ್ ಜಿಟಿಆರ್, ಮರ್ಸಿಡಿಸ್ ಎಸ್‍ಎಲ್36 ಎಎಂಜಿ, ಆಸ್ಟನ್ ಮಾರ್ಟಿನ್, ಹೈ ಬ್ರಿಡ್ ಪೋರ್ಶೆ, ಬಿಎಂಡಬ್ಲ್ಯೂ ಎಂ6 ಗ್ರಾನ್ ಕೂಪ್, ಮರ್ಸಿಡಿಸ್ ಜಿ36 ಎಎಂಜಿ ಕಾರುಗಳು ಇವೆ.
ಮೈಲೇಜ್ ಎಷ್ಟು? ಆಟೋಮೊಬೈಲ್ ವೆಬ್‍ಸೈಟ್‍ಗಳು ಪ್ರಕಟಿಸಿದಂತೆ ಒಂದು ಲೀಟರ್ ಪೆಟ್ರೋಲ್‍ಗೆ ಬುಗಾಟಿ ವೇಯ್ರಾನ್ ಕಾರು ನಗರದಲ್ಲಿ 2.3 ಕಿ.ಮೀ ಮೈಲೇಜ್ ನೀಡಿದ್ರೆ, ಹೈವೇಯಲ್ಲಿ 6.3 ಕಿ.ಮೀ ನೀಡುತ್ತದೆ.
Comments
Post a Comment