2017ನೇ ಸಾಲಿನ ಸಿಇಟಿ ವೇಳಾಪಟ್ಟಿ ಪ್ರಕಟ April 25, 2017
ಬೆಂಗಳೂರು,ಏ.25 -ಮೇ 2 ಮತ್ತು 3ರಂದು 2017ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಮೇ 2ರಂದು ಬೆಳಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ ಹಾಗೂ ಮಧ್ಯಾಹ್ನ 2.30ರಿಂದ 3.50ರ ವರೆಗೆ ಗಣಿತ ಪರೀಕ್ಷೆ ನಡೆಯಲಿದೆ. ಮೇ 3ರಂದು ಬೆಳಗ್ಗೆ 10.30ರಿಂದ 11.50ರವರೆಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ 2.30ರಿಂದ 3.50ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಮೇ 4ರಂದು ಬೆಳಗ್ಗೆ 11.30ರಿಂದ 12.30ರವರೆಗೆ ಕನ್ನಡ ಭಾಷಾ ಪರೀಕ್ಷೆ ಬೆಂಗಳೂರು ಕೇಂದ್ರದಲ್ಲಿ ನಡೆಯಲಿದೆ.
ಇದೇ ಮೊದಲ ಬಾರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮುದ್ರಿಸಲಾಗಿದೆ. ಮೇ 3ರಂದು ಪರೀಕ್ಷಾ ಅವಧಿ ಮುಗಿದ ನಂತರ ಅಭ್ಯರ್ಥಿಗಳು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಬ್ರೌಚರ್(ಮಾಹಿತಿ ಪುಸ್ತಕ)ಗಳನ್ನು ಪಡೆದುಕೊಳ್ಳಬೇಕು. ನೀಲಿ ಮತ್ತು ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್ನನ್ನೇ ಪರೀಕ್ಷೆಗೆ ಬಳಸಬೇಕು. ಪ್ರವೇಶ ಪತ್ರದ ಜೊತೆಗೆ ಅಭ್ಯರ್ಥಿಯು ಕಡ್ಡಾಯವಾಗಿ ಕಾಲೇಜಿನ ಗುರುತಿನ ಚೀಟಿ ತರಬೇಕು, ಅಲ್ಲದೆ ಆಧಾರ್ಕಾರ್ಡ್, ಪಾನ್ಕಾರ್ಡ್, ವಾಹನ ಪರವಾನಗಿ ಸೇರಿದಂತೆ ಯಾವುದಾದರೊಂದನ್ನು ಮಾಹಿತಿಗಾಗಿ ತೆಗೆದುಕೊಂಡು ಹೋಗಬೇಕು.
ಪರೀಕ್ಷಾ ಕೇಂದ್ರದೊಳಗೆ ಕೈ ಗಡಿಯಾರ, ಮೊಬೈಲ್, ಕ್ಯಾಲ್ಕ್ಯೂಲೇಟರ್ಗಳನ್ನು ಕೊಂಡೊಯ್ಯುವಂತಿಲ್ಲ.
ಬೆಂಗಳೂರಿನ 82 ಕೇಂದ್ರ ಸೇರಿದಂತೆ ರಾಜ್ಯದಲ್ಲಿ 404 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 94,415 ಪುರುಷ ಅಭ್ಯರ್ಥಿಗಳು ಹಾಗೂ 90,996 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 1,85,411 ಅಭ್ಯರ್ಥಿಗಳು ಪರೀಕ್ಷೆಗೆ ನೊಂದಾಣಿ ಮಾಡಿಸಿದ್ದಾರೆ.
ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಆಯಾ ಜಿಲ್ಲಾಧಿಕಾರಿಗಳು ಮತ್ತು ಸಹಾಯಕ ಆಯುಕ್ತರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಮತ್ತು ಖಜಾನೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾಮಾನ್ಯ ಪ್ರವೇಶ ಪರೀಕ್ಷೆಗೆ 404 ವೀಕ್ಷಕರು, 808 ವಿಶೇಷ ಜಾಗೃತದಳದ ಸದಸ್ಯರು, 404 ಪ್ರಶ್ನೆಪತ್ರಿಕೆ ಪಾಲಕರು, 11,625 ಕೊಠಡಿ ಮೇಲ್ವಿಚಾರಕರು, 32,000 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ನೇಮಿಸಲಾಗಿದೆ. ಹೊರನಾಡು ಮತ್ತು ಗಡಿನಾಡಿಗೆ ಸೇರಿದ 1800 ಮಂದಿ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
Post a Comment