ಕೈಗೆ ಬಂದ ತುತ್ತು ಬಾಯಿಗೆ ಇಲ್ಲ; 362 ಕೆಪಿಎಸ್ ಸಿ ಅಭ್ಯರ್ಥಿಗಳ ನೇಮಕಾತಿ ಆದೇಶಕ್ಕೆ ತಡೆಯಾಜ್ಞೆ!

Published: 22 Apr 2017 01:32 PM IST
Government told not to issue appointment orders to 362 KPSC candidates

ಸಂಗ್ರಹ ಚಿತ್ರ

ಬೆಂಗಳೂರು: ತೀವ್ರ ನಿರೀಕ್ಷೆ ಹುಟ್ಟಿಸಿದ್ದ ಕೆಪಿಎಸ್ ಸಿ ಅಭ್ಯರ್ಥಿಗಳ ನೇಮಕಾತಿ ಹಗರಣ ಸಂಬಂಧ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ಮತ್ತೆ ಯಾವುದೇ ಫಲಿತಾಂಶವಿಲ್ಲದೇ ಮುಂದಕ್ಕೆ ಹೋಗಿದ್ದು, ಆಯ್ಕೆಯಾದ ಎಲ್ಲ 362  ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದಂತೆ ಕೊಟ್ಟಿರುವ ತಡೆಯಾಜ್ಞೆ ತೆರವುಗೊಳಿಸಲು ಹೈಕೋರ್ಟ್‌ ನಿರಾಕರಿಸಿದೆ.

2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ (ಕೆಪಿಎಸ್‌ಸಿ) ಆಯ್ಕೆಯಾದೇ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದಂತೆ ಕೊಟ್ಟಿರುವ ತಡೆಯಾಜ್ಞೆ  ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ.  ಈ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆಯನ್ನು ಶುಕ್ರವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ  ಪಿ.ಎಸ್‌.ದಿನೇಶ್‌ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠವು, 'ಈ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಯಬೇಕಿದ್ದು, ಸಿಐಡಿ ವರದಿಯಲ್ಲಿ ವ್ಯಾಪಕ ಪರೀಕ್ಷಾ ಅಕ್ರಮ ನಡೆದಿರುವ ಕುರಿತು ಮಾಹಿತಿ ಇದೆ. ಹೀಗಾಗಿ ವಿಚಾರಣೆ  ಬಳಿಕ ಕ್ರಮ ಕೈಗೊಳ್ಳಿ' ಎಂದು ಆದೇಶಿಸಿತು.

ವಿಚಾರಣೆ ವೇಳೆ ಒಂದು ಹಂತದಲ್ಲಿ ತಡೆಯಾಜ್ಞೆ ತೆರವುಗೊಳಿಸುವ ಆದೇಶ ನೀಡಿದ್ದ ನ್ಯಾಯಾಧೀಶರಾದ ಮುಖರ್ಜಿ, ಮೈತ್ರಿ ಅವರ ವಕೀಲ ಉದಯ ಹೊಳ್ಳ ಅವರ ತೀಕ್ಷ್ಣ ಆಕ್ಷೇಪವನ್ನು ಪರಿಗಣಿಸಿ ಈ ಆದೇಶವನ್ನು ಕೇವಲ 30  ನಿಮಿಷಗಳಲ್ಲೇ ಹಿಂದಕ್ಕೆ ಪಡೆದರು. ಆನಂತರ ರಾಜ್ಯ ಸರ್ಕಾರದ ನಡೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ, 'ನೀವು ನೇಮಕಾತಿ ಅಧಿಸೂಚನೆ ವಾಪಸು ಪಡೆದಿದ್ದಿರಿ. ಇದನ್ನು ಆಯ್ಕೆಯಾದ ಅಭ್ಯರ್ಥಿಗಳು  ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (ಕೆಎಟಿ) ಪ್ರಶ್ನಿಸಿದ್ದರು. ಆಗ ನೀವು ಅಧಿಸೂಚನೆ ರದ್ದುಪಡಿಸಿದ್ದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಿರಿ. ಅಂತಿಮವಾಗಿ  ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೂ ನೇಮಕಾತಿ ಆದೇಶ  ನೀಡಿ ಎಂದು ಕೆಎಟಿ ಆದೇಶಿಸಿತು. ಆದರೆ, ನೀವು ಇದರ ವಿರುದ್ಧ ಮೇಲ್ಮನವಿ ಸಲ್ಲಿಸದೆ ತಟ್ಟಸ್ಥವಾಗಿದ್ದು ಏಕೆ' ಎಂದು ಪ್ರಶ್ನಿಸಿದರು.

2011ರಲ್ಲಿ ನಡೆದಿದ್ದ ಗ್ರೂಪ್ ಎ ಮತ್ತು ಬಿ ವಿಭಾಗದ ಹುದ್ದೆಗಳಿಗೆ ನಡೆಸಲಾಗಿದ್ದ ಕೆಪಿಎಸ್ ಸಿ ಪರೀಕ್ಷೆಯಲ್ಲಿ ವ್ಯಾಪಕ ಪರೀಕ್ಷಾ ಅಕ್ರಮ ನಡೆದಿರುವ ಕುರಿತು ಸಿಐಡಿ ತನಿಖೆ ನಡೆಸಿತ್ತು. ಸೆಪ್ಟೆಂಬರ್ 10 2013ರಲ್ಲಿ ಸಿಐಡಿ ತನ್ನ ವರದಿ  ನೀಡಿ ಅಕ್ರಮ ನಡೆದಿರುವ ಕುರಿತು ವರದಿಯಲ್ಲಿ ಸ್ಪಷ್ಟಪಡಿಸಿತ್ತು. ವರದಿಯಲ್ಲಿ ಕೆಪಿಎಸ್ ಸಿ ಅಧಿಕಾರಿಗಳೇ ಅಭ್ಯರ್ಥಿಗಳಿಂದ ಹಣ ಪಡೆದು ಪರೀಕ್ಷಾ ಅಕ್ರಮಕ್ಕೆ ನೆರವಾಗಿದ್ದರು ಎಂದು ವರದಿ ನೀಡಿತ್ತು. ಈ ವರದಿಯನ್ನು ಪರಿಗಣಿಸಿ  ಆಗಸ್ಚ್ 14 2014ರಂದು ರಾಜ್ಯ ಸರ್ಕಾರ 2011 ಕೆಪಿಎಸ್ ಸಿ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿತ್ತು. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಅಂದು ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು
.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK