ದೇಶದಲ್ಲೇ ಮೊದಲ ಬಾರಿಗೆ ವಾಟ್ಸಾಪ್ ಮೂಲಕ ಸಮನ್ಸ್: ಕೋರ್ಟ್ ಸೂಚನೆ
ವಾಟ್ಸಾಪ್ ಮೂಲಕ ಸಮನ್ಸ್ ಕಳುಹಿಸಿ, ಅವರಿಗೆ ತಲುಪಿದೆ ಎಂಬುದಕ್ಕೆ ಡೆಲಿವೆರಿ ಸ್ಟೇಟಸ್ ನ ಪ್ರಿಂಟ್ ಔಟ್ ತೆಗೆದುಕೊಳ್ಳಿ. ಮೊಬೈಲ್ ನಂಬರ್, ಇ ಮೇಲ್ ವಿಳಾಸ ಕೂಡ ವ್ಯಕ್ತಿಯ ಅಧಿಕೃತ ವಿಳಾಸವೇ ಎಂಬ ಆದೇಶವನ್ನು ಹರಿಯಾಣದ ಕೋರ್ಟ್ ವೊಂದು ನೀಡಿದೆ
Updated: Sat, Apr 8, 2017, 13:22 [IST]
Written by: ವಿಕಾಸ್ ನಂಜಪ್ಪ
ಹರಿಯಾಣ, ಏಪ್ರಿಲ್ 8: ಕೋರ್ಟ್ ಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ನಿಧಾನ ಎಂಬುದು ಸಾಮಾನ್ಯ ಆಕ್ಷೇಪ. ಆದರೆ ಸಮಯ ಸರಿದಂತೆ ಅಲ್ಲೂ ಬದಲಾವಣೆ ಆಗ್ತಿದೆ. ವಾಟ್ಸಾಪ್ ಅಪ್ಲಿಕೇಷನ್ ಗೆ ಸಂಬಂಧಿಸಿದಂತೆ ಖಾಸಗಿತನದ ಬಗ್ಗೆ ಸುಪ್ರೀಂ ಕೋರ್ಟ್ ಎದುರು ಪ್ರಕರಣ ಇದ್ದು, ವಿಚಾರಣೆ ಜಾರಿಯಲ್ಲಿದೆ.
ಅಂಥದ್ದರಲ್ಲಿ ಹರಿಯಾಣದ ನ್ಯಾಯಾಲಯ ವಾಟ್ಸಾಪ್ ಮೂಲಕ ನೋಟಿಸ್ ಕಳುಹಿಸಲು ಸೂಚಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದೆ. ವಿಳಂಬ ಅಗುವುದನ್ನು ತಡೆಯಬಹುದು ಎಂಬ ಕಾರಣಕ್ಕೆ ಆರ್ಥಿಕ ಆಯುಕ್ತರ ಕೋರ್ಟ್ ವಾಟ್ಸಾಪ್ ಮೂಲಕ ಸಮನ್ಸ್ ಕಳುಹಿಸಲು ಆದೇಶಿಸಿದೆ. ಪಾಲುದಾರಿಕೆ ವಿಚಾರವಾಗಿ ಹೂಡಿದ್ದ ದಾವೆಗೆ ಸಂಬಂಧಿಸಿದಂತೆ ಹೀಗೆ ಆದೇಶ ಮಾಡಲಾಗಿದೆ.
ದೇಶದ ನ್ಯಾಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಮನ್ಸ್ ಅನ್ನು ಈ ರೀತಿ ಸಂದೇಶ ಕಳುಹಿಸುವ ಅಪ್ಲಿಕೇಷನ್ ಬಳಸಿ ಎನ್ನಲಾಗಿದ್ದು, ಈಗಿನ ಸನ್ನಿವೇಶದಲ್ಲಿ ಇಮೇಲ್ ಹಾಗೂ ಮೊಬೈಲ್ ಸಂಖ್ಯೆ ಕೂಡ ಆ ವ್ಯಕ್ತಿಯ ವಿಳಾಸವೇ ಎಂದು ಆದೇಶದಲ್ಲಿ ಹೇಳಿದೆ. ಕೋರ್ಟ್ ನ ಸೀಲು ಹೊಂದಿರುವ ಸಮನ್ಸ್ ನ ಫೋಟೋವೊಂದನ್ನು ಆ ವ್ಯಕ್ತಿಯ ಮೊಬೈಲ್ ನಂಬರ್ ಗೆ ಕಳುಹಿಸುವಂತೆ ಕೂಡ ಸೂಚಿಸಿದೆ.
ವಾಟ್ಸಾಪ್ ನಲ್ಲಿ ಅವರಿಗೆ ಸಮನ್ಸ್ ತಲುಪಿದ ಸಾಕ್ಷಿಯಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ ಎಂದು ಕೂಡ ಕೋರ್ಟ್ ಹೇಳಿದೆ
Comments
Post a Comment