ಬೇಸಿಗೆ ರಜೆಯಲ್ಲಿ ತರಗತಿಗಳನ್ನು ನಡೆಸದಂತೆ ಶಾಲೆಗಳಿಗೆ ಸುತ್ತೋಲೆ
Published: 27 Apr 2017 02:19 PM IST | Updated: 27 Apr 2017 02:21 PM IST
ಬೇಸಿಗೆ ರಜೆಯಲ್ಲಿ ತರಗತಿಗಳನ್ನು ನಡೆಸದಂತೆ ಶಾಲೆಗಳಿಗೆ ಸುತ್ತೋಲೆ
ಬೆಂಗಳೂರು: ಬೇಸಿಗೆ ರಜೆಯಲ್ಲೂ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿರುವುದರ ಬಗ್ಗೆ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕು ರಕ್ಷಣಾ ಆಯೋಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಎಲ್ಲಾ ಶಾಲೆಗಳಿಗೂ ಸುತ್ತೋಲೆ ಹೊರಡಿಸಿದ್ದು, ಕೂಡಲೇ ತರಗತಿಗಳನ್ನು ನಿಲ್ಲಿಸಬೇಕೆಂದು ಸೂಚನೆ ನೀಡಿದೆ.
ಈ ಬಗ್ಗೆ ಆಯೋಗದ ಅಧ್ಯಕ್ಷ ಕೃಪಾ ಆಳ್ವ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಬೇಸಿಗೆ ರಜೆಗಳಲ್ಲೂ 2-10 ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿರುವುದರ ಬಗ್ಗೆ ಪೋಷಕರಿಂದ ದೂರು ಸ್ವೀಕರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಗೆ ಸುತ್ತೋಲೆ ಹೊರಡಿಸಿ, ಬೇಸಿಗೆ ರಜೆಯಲ್ಲೂ ತರಗತಿಗಳನ್ನು ನಡೆಸುತ್ತಿರುವುದನ್ನು ನಿಲ್ಲಿಸಬೇಕೆಂಬ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಎಂದಿನ ಶೈಕ್ಷಣಿಕ ತರಗತಿಗಳಿಂದ ವಿಶ್ರಾಂತಿ ತೆಗೆದುಕೊಳ್ಳಲು ಬೇಸಿಗೆ ರಜೆ ನೀಡಲಾಗಿರುತ್ತದೆ. ಆದರೆ ಬೇಸಿಗೆ ರಜೆಯಲ್ಲೂ ಸಹ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅಷ್ಟೇ ಅಲ್ಲದೇ ಬೇಸಿಗೆ ಶಿಬಿರಗಳ ಸಮಯವನ್ನೂ ಪ್ರತಿ ನಿತ್ಯ ಕೆಲವೇ ಗಂಟೆಗಳಿಗೆ ಸೀಮಿತಗೊಳಿಸಬೇಕು, ಈ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಸುತ್ತೋಲೆ ಹೊರಡಿಸಿದ ನಂತರವೂ ಬೇಸಿಗೆ ರಜೆಯಲ್ಲಿ ಸಿಬಿಎಸ್ ಸಿ ಅಥವಾ ಐಸಿಎಸ್ ಸಿ ತರಗತಿಗಳನ್ನು ನಡೆಸಿದರೆ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೃಪಾ ಆಳ್ವ ಎಚ್ಚರಿಸಿದ್ದಾರೆ.
Comments
Post a Comment