ಗುಮ್ನಾಮಿ ಬಾಬಾ ನೇತಾಜಿ ಸುಭಾಷ್ ಚಂದ್ರ ಬೋಸ್ ಅಲ್ಲ: ನೇತಾಜಿ ಸಾವಿನ ವಿವಾದಕ್ಕೆ ಕೊನೆಗೂ ತೆರೆ
Published: 31 May 2017 12:42 PM IST | Updated: 31 May 2017 01:33 PM IST
ಸಂಗ್ರಹ ಚಿತ್ರ
ನವದೆಹಲಿ: ತೈವಾನ್ ನಲ್ಲಿ 1945ರಲ್ಲಿ ನಡೆದ ವಿಮಾನ ಅಫಘಾತದಲ್ಲೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ.ದೇಶಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಆರ್ ಟಿಐ ಅರ್ಜಿಗೆ ಉತ್ತರಿಸಿರುವ ಕೇಂದ್ರ ಸರ್ಕಾರ ಕೊನೆಗೂ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 1945ರಲ್ಲಿ ತೈವಾನ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಅಂತೆಯೇ 1980ರ ದಶಕದಲ್ಲಿ ಜೀವಿಸಿದ್ದ ಗುಮ್ನಾಮಿ ಬಾಬಾ ಸುಭಾಷ್ ಚಂದ್ರ ಬೋಸ್ ಅಲ್ಲ ಎಂದು ಸ್ಪಷ್ಟಡಿಸಿದೆ.ಮಾಹಿತಿಹಕ್ಕು ಕಾಯ್ದೆಯಡಿ ಸಾಯಕ್ ಸೇನ್ ಎಂಬುವರು ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಕೇಂದ್ರ ಗೃಹ ಇಲಾಖೆ, '1945ರ ವಿಮಾನ ದುರಂತದಲ್ಲೇ ನೇತಾಜಿ ಅವರು ಮೃತಪಟ್ಟಿದ್ದಾರೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಶಾನವಾಜ್ ಆಯೋಗ, ಜಿ.ಡಿ. ಖೋಸ್ಲಾ ಆಯೋಗ ಮತ್ತು ಮುಖರ್ಜಿ ಆಯೋಗದ ತನಿಖಾ ವರದಿಗಳ ಆಧಾರದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸರ್ಕಾರ ಹೇಳಿದೆ. ಅಂತೆಯೇ "ಮುಖರ್ಜಿ ಆಯೋಗದ ವರದಿಯಲ್ಲಿ ಗುಮ್ನಾಮಿ ಬಾಬಾ ಬಗ್ಗೆ ಉಲ್ಲೇಖವಿದೆ. ಆದರೆ, ಗುಮ್ನಾಮಿ ಬಾಬಾ ಅಥವಾ ಭಗವಾನ್ ಜಿ ಅವರು ಸುಭಾಷ್ ಚಂದ್ರ ಬೋಸ್ ಅಲ್ಲ ಎಂದು ಆಯೋಗದ ವರದಿ ಸ್ಪಷ್ಟಪಡಿಸಿದೆ ಎಂದು ತನ್ನ ಉತ್ತರದಲ್ಲಿ ಉಲ್ಲೇಖಿಸಿದೆ.ಆ ಮೂಲಕ ಕೇಂದ್ರ ಸರ್ಕಾರ ಮೂಲಕ ನೇತಾಜಿ ಸಾವಿಗೆ ಸಂಬಂಧಿಸಿ ಇರುವ ಹಲವು ಊಹಾಪೋಹಗಳಿಗೆ ಅಂತಿಮ ತೆರೆ ಎಳೆದಿದೆ.
Comments
Post a Comment