ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಹುಡುಗನ ಮಿಂಚು; ಮಿಲ್ಕಾ ಸಿಂಗ್ ಬಳಿಕ ನೀರಜ್ ಐತಿಹಾಸಿಕ ದಾಖಲೆ:-

news18
Updated:August 28, 2018, 3:20 PM IST

ನ್ಯೂಸ್ 18 ಕನ್ನಡ

ಏಷ್ಯನ್ ಗೇಮ್ಸ್​ನ ಉದ್ಘಾಟನೆಯಲ್ಲಿ ಭಾರತದ ಧ್ವಜದಾರಿಯಾಗಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಕೋಟ್ಯಾಂತರ ಭಾರತೀಯರ ನಿರೀಕ್ಷೆಯನ್ನು ಹುಸಿಗೊಳಸದೆ ಜಕಾರ್ತದಲ್ಲಿ ಐತಿಹಾಸಿಕ ಸ್ವರ್ಣ ಪದಕ ಗೆದ್ದು ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಹಿಂದೆಂದೂ ಯಾವೊಬ್ಬ ಭಾರತೀಯ ಕ್ರೀಡಾಪಟು ಮಾಡದ ಸಾಧನೆಯನ್ನ 22 ವರ್ಷದ ನೀರಜ್ ಚೋಪ್ರಾ ಮಾಡಿ ತೋರಿಸಿದ್ದಾರೆ.

ಪುರುಷರ ಜಾವೆಲಿನ್ ತ್ರೋ ಸ್ಪರ್ಧೆಯ ಫೈನಲ್​ನಲ್ಲಿ ತನ್ನ ಬಾಹುಬಲ ಪ್ರದರ್ಶಿಸಿದ ನೀರಜ್ ಅವರು ಮೊದಲ ಸುತ್ತಿನಲ್ಲೇ 83.46 ಮೀಟರ್ ದೂರ ಎಸೆದು ಮೊದಲಿಗರಾಗಿ ಗುರುತಿಸಿಕೊಂಡಿದ್ದರು. ಆದರೆ 2ನೇ ಎಸೆತದಲ್ಲಿ ಫೌಲ್ ಮಾಡಿದ ಪರಿಣಾಮ ಮೂರನೇ ಪ್ರಯತ್ನದಲ್ಲಿ ಎದುರಾಳಿಗೆ ಬೆವಳಿಸುವಂತೆ ಪ್ರದರ್ಶನ ತೋರಿದರು. ತನ್ನ ಶಕ್ತಿಯನ್ನೆಲ್ಲಾ ಒಟ್ಟಾಗಿ ಜಾವೆಲಿನ್ ತ್ರೋ ಮಾಡಿದ ನೀರಜ್ , 88.06 ಮೀಟರ್ ದೂರಕ್ಕೆ ಎಸೆಯುವ ಮೂಲಕ ತನ್ನ ಹಿಂದಿದ್ದ ದಾಖಲೆಗಳನ್ನೆಲ್ಲಾ ಮುರಿದು ಚಿನ್ನಕ್ಕೆ ಗುರಿಯಿಟ್ಟರು. ನೀರಜ್​​ಗೆ ಸ್ಪರ್ಧೆಯೊಡ್ಡಿದ್ದ ಯಾವೊಬ್ಬ ಆಟಗಾರನೂ ಅವರ ಹತ್ತಿರವೂ ಸಮೀಪಿಸಲಿಲ್ಲ. 6 ಪ್ರಯತ್ನದಲ್ಲಿ ನೀರಜ್ ಎಲ್ಲರಿಗಿಂತ ಮುಂದಿದ್ದರು. ಈ ಮೂಲಕ ನೀರಜ್ ಕಾಮನ್​ವೆಲ್ತ್​​ ಗೇಮ್ಸ್ ಬಳಿಕ ಏಷ್ಯನ್ ಗೇಮ್ಸ್​​ನಲ್ಲೂ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆಯನ್ನ ಸೃಷ್ಟಿಸಿದ್ದಾರೆ.

ಭಾರತದ ಅಥ್ಲೆಟಿಕ್ಸ್​​ನಲ್ಲಿ ನೀರಜ್ ಚೋಪ್ರಾ ಹೆಸರು ಮುಂದೆಂದು ಮರೆಯದಂತೆ ಮಾಡಿದೆ. ದಿ ಫ್ಲೈಯಿಂಗ್ ಸಿಖ್ ಎಂದೇ ಕರೆಸಿಕೊಂಡಿದ್ದ ಮಿಲ್ಕಾ ಸಿಂಗ್ 1958ರಲ್ಲಿ ಒಂದೇ ವರ್ಷದಲ್ಲಿ ಕಾಮನ್​​ವೆಲ್ತ್​​ ಹಾಗೂ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದರು. ಅದಾದ ಬಳಿಕ 60 ವರ್ಷಗಳ ನಂತರ ಇದೀಗ ನೀರಜ್ ಚೋಪ್ರಾ ವರ್ಷವೊಂದರಲ್ಲಿ ಎರಡೂ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಯಂಗ್ ಲೆಜೆಂಡ್ ಆಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಭಾರತದ ಅಥ್ಲೀಟ್​​ವೊಬ್ಬ ಹಿಂದೆಂದೂ ಜಾವೆಲಿನ್ ತ್ರೋನಲ್ಲಿ ಮಾಡಿರದ ಸಾಧನೆಯನ್ನ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು