ಆಧಾರ್ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ದೆಹಲಿ: ಆಧಾರ್ ಯೋಜನೆಯ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವುದರ ಮೂಲಕ ಮಹತ್ವದ ತೀರ್ಪು ಪ್ರಕಟಿಸಿದೆ.
ಆಧಾರ್ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಐದು ಮಂದಿ ನ್ಯಾಯಮೂರ್ತಿಗಳ ಪೀಠ, ಆಧಾರ್ ನ ಸಾಂವಿಧಾನಿಕ ಸಿಂಧುತ್ವ ಕುರಿತು ತೀರ್ಪು ಪ್ರಕಟಿಸಿತು. ಆಧಾರ್ ವಿರುದ್ಧದ ದಾಳಿ ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 40 ಪುಟಗಳ ತೀರ್ಪಿನ ಸಾರಾಂಶವನ್ನು ಪ್ರಕಟಿಸಿದ ನ್ಯಾ.ಸಿಕ್ರಿ, ಖಾಸಗಿತನವು ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕು ನೀಡಿದೆ ಎಂದರು.
ಇನ್ನು ಶಿಕ್ಷಣ ಸಂಸ್ಥೆ, ಬ್ಯಾಂಕ್‍ಗಳಲ್ಲಿ ಆಧಾರ್ ಕಡ್ಡಾಯವಲ್ಲ. ಮೊಬೈಲ್ ನಂಬರ್ ಗಳಿಗೂ ಆಧಾರ್ ಜೋಡಣೆ ಕಡ್ಡಾಯವಲ್ಲ. ಆದರೆ ಸರಕಾರದ ಯೋಜನೆಗಳಿಗೆ ಮಾತ್ರ ಆಧಾರ್ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗೆ ಪಾನ್ ಕಾರ್ಡ್ ಗೆ ಆಧಾರ್ ಜೋಡಣೆ ಕಡ್ಡಾಯ ಎಂದು ಕೋರ್ಟ್ ಹೇಳಿದೆ. ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿ ತಿರುಚಲು ಸಾಧ್ಯವಿಲ್ಲ. ಆಧಾರ್ ಕಾರ್ಡ್ ನಕಲಿ ಮಾಡಲು ಸಾಧ್ಯವಿಲ್ಲ. ನಕಲಿ ಸೃಷ್ಠಿ ಮಾಡಲು ಅವಕಾಶ ಇದ್ದರೆ ಅದನ್ನು ತಡೆಗಟ್ಟಿ, ಆಧಾರ್ ನಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಆಧಾರ್ ದಾಖಲಾತಿಗಾಗಿ ಕೇವಲ ಕನಿಷ್ಠ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಆಧಾರ್ ದೇಶದ ಸಾಮಾನ್ಯ ನಾಗರಿಕರ ಗುರುತಾಗಿದೆ. ಆಧಾರ್ ಕಾರ್ಡ್‌ಗೂ ಗುರುತಿಗೂ ವ್ಯತ್ಯಾಸವಿದೆ. ಬಯೋಮೆಟ್ರಿಕ್ ಮಾಹಿತಿಯನ್ನು ಒಂದು ಬಾರಿ ಸಂಗ್ರಹ ಮಾಡಿದರೆ ಅದು ವ್ಯವಸ್ಥೆಯಲ್ಲೇ ಉಳಿಯಲಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಬಡವರಿಗೆ ಆಧಾರ್ ಯೋಜನೆ ಅನುಕೂಲವಾಗಿದ್ದು, ಇದರಿಂದ ಫಲಾನುಭಾವಿಗಳಿಗೆ ನೇರವಾಗಿ ತಲುಪುತ್ತದೆ. ಜನತೆಗೆ ಆಧಾರ್ ಕಾರ್ಡ್ ನಿಂದ ಉಪಯೋಗವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಆಧಾರ್ ಕಾಯ್ದೆಯ ಸೆಕ್ಷನ್ 57ನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಖಾಸಗಿ ಸಂಸ್ಥೆಗಳಿಗೆ ಅಥವಾ ಕಾರ್ಪೊರೇಟ್ ಸಂಸ್ಥೆಗಳಿಗೆ ಬಯೋಮೆಟ್ರಿಕ್ ಮಾಹಿತಿಯನ್ನು ನೀಡುವಂತಿಲ್ಲ. ಖಾಸಗಿ ಕಂಪನಿಗಳು ಆಧಾರ್ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಆಧಾರ್ ಸಿಂಧುತ್ವ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ ಸೇರಿದಂತೆ 24 ಮಂದಿ ಅರ್ಜಿ ಸಲ್ಲಿಸಿದ್ದರು. 2017ರ ತೀರ್ಪಿನಲ್ಲಿ ವ್ಯಕ್ತಿಗಳ ಖಾಸಗಿತನವನ್ನು ಅವರ ಮೂಲಭೂತ ಹಕ್ಕೆಂದು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದರಿಂದ, ಆಧಾರ್ ವಿಷಯದಲ್ಲಿನ ತೀರ್ಪು ಕುತೂಹಲ ಮೂಡಿಸಿತ್ತು.
Comments
Post a Comment