ಕೂಡಲಸಂಗಮ: ವಚನ ಚಳವಳಿಯ ರೂವಾರಿ, ಕಾಯಕಯೋಗಿ ಅಣ್ಣ ಬಸವಣ್ಣನ ಲಿಂಗೈಕ್ಯ ಸ್ಥಳ ಕೂಡಲ ಸಂಗಮದಲ್ಲಿ ದೇಶದ ಬಡ ಮುಖ್ಯಮಂತ್ರಿಯೆಂದೇ ಹೆಸರಾಗಿರುವ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರಿಗೆ ಭಾನುವಾರ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದಿಂದ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಒಂದು ಲಕ್ಷ ರೂ. ನಗದು, ಸ್ಮರಣ ಫಲಕ, ಬಸವ ಭಾವಚಿತ್ರ ಒಳಗೊಂಡ ಪ್ರಶಸ್ತಿಯನ್ನು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಚಿವೆ ಉಮಾಶ್ರೀ ವಿತರಿಸಿದರು. ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ಮಾಣಿಕ್ ಸರ್ಕಾರ್ ಬಸವಣ್ಣನ ಐಕ್ಯ ಮಂಟಪಕ್ಕೆ ಹೂವು ಸಮರ್ಪಿಸಿದರು. ರೈತ ಗೀತೆಗೆ ಹಸಿರು ಟವೆಲ್ ಬೀಸುವ ಮೂಲಕ ರೈತರಲ್ಲಿ ಮಿಂಚು ಹರಿಸಿದರು. ಸಾಹಿತಿ ರಂಜಾನ್ ದರ್ಗಾ ಬರೆದಿರುವ ಶರಣರ ಸಮಗ್ರ ಕ್ರಾಂತಿ ಪುಸ್ತಕ ಲೋಕಾರ್ಪಣೆಗೊಳಿಸಿದರು. ಪ್ರಶಸ್ತಿ ಸ್ವೀಕರಿಸಿದ ನಂತರ ಮಾಣಿಕ್ ಸರ್ಕಾರ್ ಮಾತನಾಡಿ, ದೇವಾಲಯ, ಮಸೀದಿ, ಚರ್ಚ್ ಗಳಲ್ಲಿ ಪ್ರಾರ್ಥನೆ ಸಲ್ಲಿಸಿದರೆ ದೇವರು ಸಿಗುವುದಿಲ್ಲ. ದೀನ, ದರಿದ್ರರ, ದುರ್ಬಲರ ಸಮಸ್ಯೆಗಳಿಗೆ ಸ್ಪಂದಿಸಿ ಕಿಂಚಿತ್ ಪರಿಹಾರಕ್ಕೆ ಪ್ರಯತ್ನ ಮಾಡುವುದರಲ್ಲಿ ದೇವರನ್ನು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಪಂಚಮಸಾಲಿ ಮಹಾಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.